Samad Kottur

Welcome to my blog.

Birds of Hampi Vicinity

Friday, March 2, 2012

This bird can be seen in and around paddy fields in Hampi vicinity.

Name : Black Ibis
Scientific Name : Pseudivis papillosa
Size : 68 cms +/-
Features: Black body with white patch in the shoulders and red caplike warts on head.
Distribution: River banks, paddy fields and marshy area.
Native to India

Friday, July 24, 2009

ಹಳದಿ ಕಂಠದ ಪಿಕರಾಳ. (Yellow-Throated Bulbul)



ಹಳದಿ ಕಂಠದ ಪಿಕರಾಳ ಒಂದು ಅತ್ಯಂತ ಅಪರೂಪದ ಬುಲಬುಲ್ ಹಕ್ಕಿ. ಇದು ಇಡೀ ದಕ್ಷಿಣ ಬಾರತದ ಕೆಲವೇ ಕೆಲವು ಪ್ರದೇಶಗಳಲ್ಲಿ ಹಂಚಿಕೆಯಾಗಿದೆ. ಇದು ನಮ್ಮ ಹಂಪಿಯಲ್ಲಿ ಇವೆಯಲ್ಲ ಕಲ್ಲು ಬಂಡೆಗಳ ಬೆಟ್ಟ-ಗುಡ್ಡಗಳು - ಅಂತಹ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತದೆ. ಪಕ್ಷಿ ತಜ್ಞ ಸಲೀಂ ಅಲಿ ಇವರ ಪುಸ್ತಕದಲ್ಲಿ ಈ ಹಕ್ಕಿಯು ರಾಮನಗರ, ಸಾವನದುರ್ಗ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕೆಲವೇ ಕೆಲವು ಭಾಗಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂದು ಬರೆದಿದ್ದರು. ಇದನ್ನು ಓದಿ ನನಗೆ ಎಲ್ಲಿಲ್ಲದ ಕುತೂಹಲ. ಈ ನೋಡಲೆಂದು ಕ್ಯಾಮೆರಾ ಹಿಡಿದುಕೊಂಡು ರಾಮನಗರ, ಸಾವನದುರ್ಗ ಸುತ್ತಾದಿದ್ದೆ ಸುತ್ತಾಡಿದ್ದು. ಆದರೆ ಅದನ್ನು ನೋಡಲಾಗಲೀ, ಫೋಟೋ ತೆಗೆಯುವುದಾಗಲೀ ಸಾಧ್ಯವಾಗಿರಲಿಲ್ಲ.


ಆದರೆ ದರೋಜಿ ಕರಡಿ ಧಾಮದಲ್ಲಿ ಈ ಸುಂದರವಾದ ಬುಲ್ ಬುಲ್ ಇದೆಯೆಂದು ಕೆಲವು ಪಕ್ಷಿತಜ್ಞರು ಹೇಳಿದ್ದರು. ಅಲ್ಲಿಯೂ ಕ್ಯಾಮೆರಾ ಹಿಡಿದುಕೊಂಡು ಅಲೆದಾಡಿದ್ದೆ. ಅಲ್ಲಿನ ವೀಕ್ಷಣಾ ಗೋಪುರದ ಹತ್ತಿರ ಒಮ್ಮೆ ಸರ್ರಂತ ಬಂದು ಪುರ್ರಂತ ಹಾರಿಹೋಯಿತು. ಫೋಟೋ ತೆಗೆಯಲಾಗಲಿಲ್ಲ. ಆಮೇಲೆ ಒಮ್ಮೆ ಹಂಪಿಯಾಚೆಯ ಆನೆಗುಂದಿಯ ಬಳಿ ನನ್ನ ಗೆಳೆಯರೊಬ್ಬರ ಮನೆಗೆ ಹೋದಾಗ, ಸಡನ್ನಾಗಿ ಈ ಹಕ್ಕಿ ಬಂದು ಎದುರಿನ ಮರದ ಟೊಂಗೆಯ ಮೇಲೆ ಕುಲಿತುಕೊಳ್ಳಬೇಕೆ? ಕ್ಯಾಮೆರಾ ಎತ್ತಿದವನೇ ಚಕ ಚಕಾಂತ ಫೋಟೋ ಕ್ಲಿಕ್ಕಿಸಿದೆ. ಅದರಲ್ಲಿ ಒಂದೇ ಒಂದು ಚಿತ್ರ ಸರಿಯಾಗಿತ್ತು. ಅದುವೇ ಎಲ್ಲಾ ನನ್ನ ಗೆಳೆಯರು ತೆಗೆದ ಚಿತ್ರಗಳಲ್ಲೇ ಅತ್ಯಂತ ಸುಂದರವಾಗಿದೆಯೆಂದು ಹೇಳಿದರು.


ಅದಾದ ನಂತರ ಒಮ್ಮೆ ಬೆಳಿಗ್ಗೆ ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನದ ಎದುರಿನಲ್ಲಿರುವ ಎದುರು ಬಸವಣ್ಣನ ಪಕ್ಕದಿಂದ ಮಾತಂಗ ಪರ್ವತದ ತಳದಲ್ಲಿ ವೀಕ್ಷಣೆಗೆಂದು ಹೋಗುತ್ತಿದ್ದೆ. ಸಡನ್ನಾಗಿ ಪಕ್ಕದ ಕಲ್ಲು ಮಂಟಪದ ಮೇಲಿನಿಂದ ಸುಶ್ರ್ಯಾವ್ಯವಾಗಿ ಹಕ್ಕಿಯೊಂದು ಹಾಡುತ್ತಿತ್ತು. ತಕ್ಷಣ ಕ್ಯಾಮೆರಾ ಎತ್ತಿಕೊಂಡು ಕ್ಲಿಕ್ಕಿಸಿದೆ. ಅದು ಹಳದಿ ಗಂಟಲಿನ ಪಿಕರಾಳ. ಎಷ್ಟೊಂದು ಹತ್ತಿರದಲ್ಲಿತ್ತು ಅಂತೀರಿ. ಆಮೇಲೆ ಈ ಹಕ್ಕಿಯನ್ನು ಅತಿ ಹತ್ತಿರದಿಂದ ನೋಡಲು ಇದಕ್ಕಿಂತ ಇನ್ನೊಂದು ಸ್ಥಳ ಇನ್ನೊಂದಿಲ್ಲ ಎನ್ನಬಹುದು. ದರೋಜಿ ಕರಡಿ ಧಾಮಕ್ಕೆಂದು ಬರುವ ಅದೆಷ್ಟು ಗೆಳೆಯರನ್ನು ಈ ಹಕ್ಕಿಯನ್ನು ನೋಡಲು ಕಳುಹಿಸಿದ್ದೆನೆಂದು ನನಗೆ ನೆನಪಿಲ್ಲ.

ಈಗ ಅನಿಸುತ್ತಿದೆ ನಮ್ಮ ಹಿತ್ತಲಲ್ಲೇ ಈ ಅಪರೂಪದ ಹಕ್ಕಿಯನ್ನು ಇಟ್ಟುಕೊಂಡು ಎಲ್ಲೆಲ್ಲೊ ಸುತ್ತದಿದೆನಲ್ಲಾ ಎಂದು. ಹಂಪಿಯ ಕಲ್ಲು ಬಂಡೆಗಳ ಬೆಟ್ಟಗಳ ಎತ್ತರದ ಕುರುಚಲು ಕಾಡಿನಲ್ಲಿ ಎಷ್ಟೊಂದು ಹಳದಿ ಕಂಠದ ಪಿಕರಾಳ ಮುಕ್ತವಾಗಿ, ಸ್ವಚ್ಚಂದವಾಗಿ ಹಾರಾಡಿಕೊಂಡಿವೆ. ಇಲ್ಲಿನ ವಿಶಿಷ್ಟವಾದ ಗಿಡಮರಗಳ, ಹೂಬಳ್ಳಿಗಳ ಹಣ್ಣುಗಳೇ ಇವುಗಳ ಆಹಾರ. ನೋಡಿದರೆ ಯಾವುದೇ ಕೆಲಸಕ್ಕೆ ಬಾರದ ಕಳೆ ಎಂದುಕೊಂಡಿರುವ ಗಿಡಗಳು ಈ ಹಕ್ಕಿಗಳಿಗೆ ಆಹಾರವನ್ನು ನೀಡುತ್ತವೆ. ಇಂತಹ ಹಣ್ಣುಗಳನ್ನು ತಿಂದ ಈ ಹಕ್ಕಿ ತನ್ನ ಹಿಕ್ಕೆಯ ಮೂಲಕ ಬೀಜವನ್ನುದುರಿಸಿ ಇವೇ ಗಿಡಗಳ ವಂಶಾಭಿವೃದ್ಧಿ ಮಾಡುತ್ತಿವೆ.

Thursday, December 4, 2008

ಹಕ್ಕಿಗಳ ಸುಂದರ ಲೋಕ

ಹಕ್ಕಿಗಳು ನಮ್ಮ ನಿತ್ಯ ಜೀವನದಲ್ಲಿ ಅತಿಹೆಚ್ಚಾಗಿ ನೋಡುವ ವನ್ಯಜೀವಿಗಳು. ಇವು ಎಲ್ಲರನ್ನು ಅಯಸ್ಕಾಂತದಂತೆ ಆಕರ್ಷಿಸುತ್ತವೆ. ಮೊದಮೊದಲಿಗೆ ನಾನು ನಮ್ಮಲ್ಲಿ ಕೇವಲ ಕಾಗೆ, ಗುಬ್ಬಿ, ಗಿಳಿ, ಹದ್ದು, ಗೂಬೆ, ಮೈನಾ ಇವೇ ಮುಂತಾದ ಬೆರಳೆಣಿಕೆಯಷ್ಟು ಹಕ್ಕಿಗಳು ಮಾತ್ರ ನಮ್ಮಲ್ಲಿವೆ ಎಂದು ತಿಳಿದಿದ್ದೆ. ತೊಂಬತ್ತೈದರಲ್ಲಿ ನಾನು ಹಕ್ಕಿಗಳನ್ನು ನೋಡಲು ಮೈಸೂರಿಗೆಹೋಗುತ್ತಿದ್ದೆ. ಅಲ್ಲಿ ಮ್ಯಾನ್ ಸಂಸ್ಥೆಯ ಮನು ಹಾಗೂ ಅವರ ಗೆಳೆಯರೊಂದಿಗೆ ಬನ್ನೂರು, ಯಳಂದೂರು, ಕೊಳ್ಳೇಗಾಲ ಮುಂತಾದ ಊರುಗಳ ಸಾಲು ಸಾಲು ಕೆರೆಗಳ ಸಾವಿರಾರು ಸಂಖ್ಯೆಯ ವಿವಿಧ ವಲಸೆ ಹಕ್ಕಿಗಳನ್ನು ನೋಡಿ ರೋಮಾಂಚನವಾಗುತ್ತಿತ್ತು.
ಯಾವಾಗ ಹೊಸಪೇಟೆಯ ಸುತ್ತಲಿನ ಕೆರೆಗಳು, ತುಂಗಭದ್ರಾ ಅಣೆಕಟ್ಟಿನ ಹಿನ್ನಿರಿನ ಪ್ರದೇಶ, ದರೋಜಿ ಕರಡಿ ಧಾಮದಲ್ಲಿ ದುರ್ಬೀನು ಹಾಗೂ ಸಲೀಂ ಅಲಿಯವರು ಬರೆದ ಪಕ್ಷಿ ವೀಕ್ಷಕರ ಮಾರ್ಗದರ್ಶಿ ಪುಸ್ತಕ ಹಿಡಿದುಕೊಂಡು ಹುಚ್ಚನಂತೆ ತಿರುಗಾಡಿದಾಗ ಗೊತ್ತಾಗಿದ್ದು ನಮ್ಮ ಬಯಲು ಸೀಮೆ-ಉತ್ತರ ಕರ್ನಾಟಕದಲ್ಲೇ ಅತಿ ಹೆಚ್ಚಿನ ಖಗಸಿರಿ ಇರುವುದೆಂದು. ಮತ್ತೆ ಮೂರು ವರ್ಷಗಳ ಹಿಂದೆ ಬಯಲು ಸೀಮೆಯ ಹಕ್ಕಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಆರಂಭಿಸಿದಾಗಲಂತೂ ಹೊಸಜಗತ್ತೇ ನನ್ನ ಮುಂದೆ ತೆರೆದುಕೊಂಡಿತು. ನಮ್ಮ ಸುತ್ತಮುತ್ತಲು ಎಷ್ಟೊಂದು ವೈವಿದ್ಯಮಯ ಜೀವಜಗತ್ತು ಇದೆ ಗೊತ್ತೇ? ಅದನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳುವೆ. ಬನ್ನಿ. ಸ್ವಾಗತ ನಿಮಗೆ ಖಗಲೋಕಕ್ಕೆ.

Wednesday, December 3, 2008

ನನ್ನ ಪರಿಚಯ.

ನಮಸ್ಕಾರ,
ನಾನು - ಸಮದ್ ಕೊಟ್ಟೂರು, ನಿಮ್ಮೊಂದಿಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಬಲು ಖುಷಿ ಆಗುತ್ತಿದೆ. ಹುಟ್ಟಿದ್ದು , ಬೆಳೆದಿದ್ದು, ಓದಿದ್ದು -ನನ್ನೂರು ಕೊಟ್ಟೂರಿನಲ್ಲೇ. ಎಂತಹ ಸುಂದರ ಪರಿಸರ, ಎಂಥಹ ವಾತಾವರಣ ಅಲ್ಲಿದೆ ಗೊತ್ತೇ. ಬಿ. ಎಸ್ಸಿ ಮುಗಿಸಿ ಅಲ್ಲಿಂದ ಓದಲು ಚಿತ್ರದುರ್ಗದಲ್ಲಿ ಒಂದು ವರ್ಷ ಕಳೆದು ನಂತರ ನೌಕರಿ. ಮತ್ತೆ ಆರು ತಿಂಗಳಿಗೋ ವರ್ಷಕ್ಕೊಮ್ಮೆಯೋ ಕೊಟ್ಟೂರಿಗೆ ಹೋಗುತ್ತೇನೆ.
ನಾನು ಪ್ರೌಢಶಾಲಾ ಶಿಕ್ಷಕನಾಗಿ ಸೊಂಡೂರು ತಾಲೂಕಿನ ಬಂಡ್ರಿ ಎಂಬ ಗ್ರಾಮದಲ್ಲಿ ಕೆಲಸಕ್ಕೆ ಸೇರಿದಾಗ ಅದೊಂದು ಅಧ್ಭುತ ಲೋಕಕ್ಕೆ ಬಂದಂತಾಗಿತ್ತು. ವಾರಕ್ಕೊಮ್ಮೆ ಮಕ್ಕಳ ಸೈನ್ಯವನ್ನು ಕಟ್ಟಿಕೊಂಡು ಅಲ್ಲಿನ ಸುಂದರ ಕಾಡಿನಲ್ಲಿ ಓಡಾಡಿ, ನೆಲ್ಲಿಕಾಯಿ, ಸೀತಾಫಲ ಮುಂತಾದ ಹಣ್ಣು ಹಂಪಲುಗಳನ್ನು ತರುತತಿದ್ದೆವು. ಅಪರೂಪದ ಸೈಕಾಸ್ ಎಂಬ ಮರಗಿಡಗಳು, ಗೌರಿ ಹೂವು ಎಂಬ ಅಪರೂಪದ ಔಷಧಿ ಗಿಡವನ್ನು ನೋಡಿ ರೋಮಾಂಚನವಾಗುತ್ತಿತ್ತು. ಬಂಡ್ರಿ ಗ್ರಾಮದಲ್ಲೇ ನನಗೆ ಪರಿಸರ, ಪ್ರಾಣಿ-ಪಕ್ಷಿ ಕುರಿತು ಪ್ರೀತಿ ಕಾಳಜಿ ಬೆಳೆದಿದ್ದು.
ಈಗ ಒಂದೂವರೆ ದಶಕದಿಂದ ಸಾಕಷ್ಟು ಕಲಿತಿದ್ದೇನೆ. ಇನ್ನೂ ಕಲಿಯಬೇಕಾದುದು ಬಹಳಷ್ಟು ಇದೆ. ಇಲ್ಲಿಯವರೆಗೆ ನಾನುಅನುಭವಿಸಿದ ಸುಂದರ ಪರಿಸರ, ನೋಡಿದ ಸುಂದರ ಹಕ್ಕಿಗಳು, ಮಾಡಿದ ಕೆಲವು ಹೆಮ್ಮೆಯಿಂದ ಹೇಳಿಕೊಳ್ಳುವಂಥಹ ಘಟನೆಗಳುನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ನಮಸ್ಕಾರ.