Samad Kottur

Welcome to my blog.

Birds of Hampi Vicinity

Friday, July 24, 2009

ಹಳದಿ ಕಂಠದ ಪಿಕರಾಳ. (Yellow-Throated Bulbul)



ಹಳದಿ ಕಂಠದ ಪಿಕರಾಳ ಒಂದು ಅತ್ಯಂತ ಅಪರೂಪದ ಬುಲಬುಲ್ ಹಕ್ಕಿ. ಇದು ಇಡೀ ದಕ್ಷಿಣ ಬಾರತದ ಕೆಲವೇ ಕೆಲವು ಪ್ರದೇಶಗಳಲ್ಲಿ ಹಂಚಿಕೆಯಾಗಿದೆ. ಇದು ನಮ್ಮ ಹಂಪಿಯಲ್ಲಿ ಇವೆಯಲ್ಲ ಕಲ್ಲು ಬಂಡೆಗಳ ಬೆಟ್ಟ-ಗುಡ್ಡಗಳು - ಅಂತಹ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತದೆ. ಪಕ್ಷಿ ತಜ್ಞ ಸಲೀಂ ಅಲಿ ಇವರ ಪುಸ್ತಕದಲ್ಲಿ ಈ ಹಕ್ಕಿಯು ರಾಮನಗರ, ಸಾವನದುರ್ಗ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕೆಲವೇ ಕೆಲವು ಭಾಗಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂದು ಬರೆದಿದ್ದರು. ಇದನ್ನು ಓದಿ ನನಗೆ ಎಲ್ಲಿಲ್ಲದ ಕುತೂಹಲ. ಈ ನೋಡಲೆಂದು ಕ್ಯಾಮೆರಾ ಹಿಡಿದುಕೊಂಡು ರಾಮನಗರ, ಸಾವನದುರ್ಗ ಸುತ್ತಾದಿದ್ದೆ ಸುತ್ತಾಡಿದ್ದು. ಆದರೆ ಅದನ್ನು ನೋಡಲಾಗಲೀ, ಫೋಟೋ ತೆಗೆಯುವುದಾಗಲೀ ಸಾಧ್ಯವಾಗಿರಲಿಲ್ಲ.


ಆದರೆ ದರೋಜಿ ಕರಡಿ ಧಾಮದಲ್ಲಿ ಈ ಸುಂದರವಾದ ಬುಲ್ ಬುಲ್ ಇದೆಯೆಂದು ಕೆಲವು ಪಕ್ಷಿತಜ್ಞರು ಹೇಳಿದ್ದರು. ಅಲ್ಲಿಯೂ ಕ್ಯಾಮೆರಾ ಹಿಡಿದುಕೊಂಡು ಅಲೆದಾಡಿದ್ದೆ. ಅಲ್ಲಿನ ವೀಕ್ಷಣಾ ಗೋಪುರದ ಹತ್ತಿರ ಒಮ್ಮೆ ಸರ್ರಂತ ಬಂದು ಪುರ್ರಂತ ಹಾರಿಹೋಯಿತು. ಫೋಟೋ ತೆಗೆಯಲಾಗಲಿಲ್ಲ. ಆಮೇಲೆ ಒಮ್ಮೆ ಹಂಪಿಯಾಚೆಯ ಆನೆಗುಂದಿಯ ಬಳಿ ನನ್ನ ಗೆಳೆಯರೊಬ್ಬರ ಮನೆಗೆ ಹೋದಾಗ, ಸಡನ್ನಾಗಿ ಈ ಹಕ್ಕಿ ಬಂದು ಎದುರಿನ ಮರದ ಟೊಂಗೆಯ ಮೇಲೆ ಕುಲಿತುಕೊಳ್ಳಬೇಕೆ? ಕ್ಯಾಮೆರಾ ಎತ್ತಿದವನೇ ಚಕ ಚಕಾಂತ ಫೋಟೋ ಕ್ಲಿಕ್ಕಿಸಿದೆ. ಅದರಲ್ಲಿ ಒಂದೇ ಒಂದು ಚಿತ್ರ ಸರಿಯಾಗಿತ್ತು. ಅದುವೇ ಎಲ್ಲಾ ನನ್ನ ಗೆಳೆಯರು ತೆಗೆದ ಚಿತ್ರಗಳಲ್ಲೇ ಅತ್ಯಂತ ಸುಂದರವಾಗಿದೆಯೆಂದು ಹೇಳಿದರು.


ಅದಾದ ನಂತರ ಒಮ್ಮೆ ಬೆಳಿಗ್ಗೆ ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನದ ಎದುರಿನಲ್ಲಿರುವ ಎದುರು ಬಸವಣ್ಣನ ಪಕ್ಕದಿಂದ ಮಾತಂಗ ಪರ್ವತದ ತಳದಲ್ಲಿ ವೀಕ್ಷಣೆಗೆಂದು ಹೋಗುತ್ತಿದ್ದೆ. ಸಡನ್ನಾಗಿ ಪಕ್ಕದ ಕಲ್ಲು ಮಂಟಪದ ಮೇಲಿನಿಂದ ಸುಶ್ರ್ಯಾವ್ಯವಾಗಿ ಹಕ್ಕಿಯೊಂದು ಹಾಡುತ್ತಿತ್ತು. ತಕ್ಷಣ ಕ್ಯಾಮೆರಾ ಎತ್ತಿಕೊಂಡು ಕ್ಲಿಕ್ಕಿಸಿದೆ. ಅದು ಹಳದಿ ಗಂಟಲಿನ ಪಿಕರಾಳ. ಎಷ್ಟೊಂದು ಹತ್ತಿರದಲ್ಲಿತ್ತು ಅಂತೀರಿ. ಆಮೇಲೆ ಈ ಹಕ್ಕಿಯನ್ನು ಅತಿ ಹತ್ತಿರದಿಂದ ನೋಡಲು ಇದಕ್ಕಿಂತ ಇನ್ನೊಂದು ಸ್ಥಳ ಇನ್ನೊಂದಿಲ್ಲ ಎನ್ನಬಹುದು. ದರೋಜಿ ಕರಡಿ ಧಾಮಕ್ಕೆಂದು ಬರುವ ಅದೆಷ್ಟು ಗೆಳೆಯರನ್ನು ಈ ಹಕ್ಕಿಯನ್ನು ನೋಡಲು ಕಳುಹಿಸಿದ್ದೆನೆಂದು ನನಗೆ ನೆನಪಿಲ್ಲ.

ಈಗ ಅನಿಸುತ್ತಿದೆ ನಮ್ಮ ಹಿತ್ತಲಲ್ಲೇ ಈ ಅಪರೂಪದ ಹಕ್ಕಿಯನ್ನು ಇಟ್ಟುಕೊಂಡು ಎಲ್ಲೆಲ್ಲೊ ಸುತ್ತದಿದೆನಲ್ಲಾ ಎಂದು. ಹಂಪಿಯ ಕಲ್ಲು ಬಂಡೆಗಳ ಬೆಟ್ಟಗಳ ಎತ್ತರದ ಕುರುಚಲು ಕಾಡಿನಲ್ಲಿ ಎಷ್ಟೊಂದು ಹಳದಿ ಕಂಠದ ಪಿಕರಾಳ ಮುಕ್ತವಾಗಿ, ಸ್ವಚ್ಚಂದವಾಗಿ ಹಾರಾಡಿಕೊಂಡಿವೆ. ಇಲ್ಲಿನ ವಿಶಿಷ್ಟವಾದ ಗಿಡಮರಗಳ, ಹೂಬಳ್ಳಿಗಳ ಹಣ್ಣುಗಳೇ ಇವುಗಳ ಆಹಾರ. ನೋಡಿದರೆ ಯಾವುದೇ ಕೆಲಸಕ್ಕೆ ಬಾರದ ಕಳೆ ಎಂದುಕೊಂಡಿರುವ ಗಿಡಗಳು ಈ ಹಕ್ಕಿಗಳಿಗೆ ಆಹಾರವನ್ನು ನೀಡುತ್ತವೆ. ಇಂತಹ ಹಣ್ಣುಗಳನ್ನು ತಿಂದ ಈ ಹಕ್ಕಿ ತನ್ನ ಹಿಕ್ಕೆಯ ಮೂಲಕ ಬೀಜವನ್ನುದುರಿಸಿ ಇವೇ ಗಿಡಗಳ ವಂಶಾಭಿವೃದ್ಧಿ ಮಾಡುತ್ತಿವೆ.